ಬವೇರಿಯ - 
	ಜರ್ಮನಿ ಸಂಯುಕ್ತ ಗಣರಾಜ್ಯದ ಒಂದು ರಾಜ್ಯ. ದಕ್ಷಿಣ ಜರ್ಮನಿಯ ಪೂರ್ವಭಾಗದಲ್ಲಿರುವ ಬವೇರಿಯದ ಪೂರ್ವದಲ್ಲಿ ಚೆಕೊಸ್ಲೊವಾಕಿಯ ಮತ್ತು ಆಸ್ಟ್ರಿಯ, ಪಶ್ಚಿಮದಲ್ಲಿ ಬಾಡೆನ್ ವರ್ಟ್‍ಂಬರ್ಗ್ ಮತ್ತು ಹೆಸ್‍ರಾಜ್ಯಗಳು ಉತ್ತರದಲ್ಲಿ ಜರ್ಮನ್ ಪ್ರಜಾಸತ್ತಾತ್ಮಕ ಗಣರಾಜ್ಯ, ದಕ್ಷಿಣದಲ್ಲಿ ಆಸ್ಟ್ರಿಯ ಇವೆ. ಪಶ್ಚಿಮ ಜರ್ಮನಿಯನ್ನು ಹತ್ತು ರಾಜ್ಯಗಳಾಗಿ ವಿಂಗಡಿಸಲಾಗಿದ್ದು ವಿಸ್ತೀರ್ಣದಲ್ಲಿ ಬವೇರಿಯ ಈ ಎಲ್ಲ ರಾಜ್ಯಗಳಿಗಿಂತ ದೊಡ್ಡದಾಗಿದೆ. ವಿಸ್ತೀರ್ಣ 70,547 ಚ.ಕಿಮೀ ಜನಸಂಖ್ಯೆ 11,449,000 (2001). 1918ರ ತನಕ ಬವೇರಿಯ ಜರ್ಮನ್ ಸಾಮ್ರಾಜ್ಯದ ಒಂದು ರಾಜ್ಯವೂ 1918ರಿಂದ 1945ರ ತನಕ ಜರ್ಮನ್ ರೈಖ್‍ನ ಒಂದು ರಾಜ್ಯವೂ ಆಗಿತ್ತು. ಇದರ ಜರ್ಮನ್ ಹೆಸರು ಬೈಅರ್ನ್, ಬಳಕೆಯಲ್ಲಿಯ ಬವೇರಿಯ ಇಂಗ್ಲಿಷ್ ಸಾಂಪ್ರದಾಯಿಕ ಹೆಸರು, ರಾಜಧಾನಿ ಮ್ಯೂನಿಕ್.

	ಬವೇರಿಯದ ಮೇಲ್ಮೈಲಕ್ಷಣವನ್ನು ಬವೇರಿಯನ್ ಆಲ್ಪ್ಸ್ ವಲಯ ಹಾಗೂ ಪ್ರಸ್ಥಭೂಮಿ ಎಂದು ವಿಂಗಡಿಸಿದ್ದಾರೆ. ಇದು ಪರ್ವತಗಳ ಪ್ರದೇಶ. ದಕ್ಷಿಣದಲ್ಲಿ ಆಲ್ಟ್ಸ್ ಪರ್ವತ, ಉತ್ತರದಲ್ಲಿ ಫ್ರಾಂಕನ್ ವಾಲ್ಟ್ ಮತ್ತು ಈಶಾನ್ಯದಲ್ಲಿ ಬ್ರೊಹೀಮಿಯನ್ ಅರಣ್ಯ ಪ್ರದೇಶ ಇವೆ. ಪಶ್ಚಿಮದಿಂದ ಪೂರ್ವಕ್ಕೆ ಹರಿವ ಡ್ಯಾನ್ಯೂಬ್ ನದಿ ಬವೇರಿಯವನ್ನು ಸ್ಥೂಲವಾಗಿ ಉತ್ತರ ಮತ್ತು ದಕ್ಷಿಣ ಪ್ರದೇಶವಾಗಿ ವಿಭಾಗಿಸುತ್ತದೆ. ವಿಶೇಷವಾಗಿ ಡ್ಯಾನ್ಯೂಬ್ ನದಿಯ ದಕ್ಷಿಣಕ್ಕಿರುವ ಬವೇರಿಯದ ಒಂದು ದೊಡ್ಡ ಭಾಗ ಸಮುದ್ರ ಪಾತಳಿಯಿಂದ ಸರಾಸರಿ 487.5 ಮೀಟರ್ ಎತ್ತರವಿರುವ ಉನ್ನತ ಪ್ರಸ್ಥಭೂಮಿ. ಈ ಪ್ರದೇಶವನ್ನು ಅನೇಕ ದೊಡ್ಡ ಹಳ್ಳಿಗಳೂ ಸಾಮಾನ್ಯ ಎತ್ತರವಿರುವ ಗುಡ್ಡಗಳೂ ಸುತ್ತುವರಿದೆವೆ. ಆಸ್ಟ್ರಿಯದ ದಕ್ಷಿಣ ಗಡಿಯಾಗಿರುವ ಅಲ್ಗಾವರ್ ಆಲ್ಪ್ಸ್ ಬವೇರಿಯನ್ ಅಲ್ಪ್ಸ್ ಮತ್ತು ಸಾಲ್ಜಬರ್ಗರ್ ಆಲ್ಪ್ಸ್ ಪರ್ವತ ಶ್ರೇಣಿಗಳು ನಾರಿಕ್ ಆಲ್ಪ್ಸ್‍ನ ಒಂದು ಶಾಖೆ. ಆಲ್ಪ್ಸ್ ಪರ್ವಗಳ ಕವಲುಗಳು ಪ್ರಸ್ಥಭೂಮಿಯೊಳಕ್ಕೆ ಚಾಚಿವೆ. ಈ ಪರ್ವತಶ್ರೇಣಿಗಳಲ್ಲಿ ಹೆಚ್ಚು ಎತ್ತರವಿರುವ ಟ್ಸುಗ್‍ಸ್ವಿಟ್ಸಿ ಸುಮಾರು 2963 ಮೀಟರ್ ವಾಟ್ಸ್‍ಮಾನ್ ಸುಮಾರು 3016ಮೀ, ಹಾಗೂ ಹೊಕ್ ಫೋಗೆಲ್ ಮತ್ತು ಮೆಡ್ಲಗಾಬಲ್ ಶಿಖರಗಳಿವೆ. ಇದರ ಉತ್ತರಕ್ಕೆ ಚೆಕೊಸ್ಲೊವಾಕಿಯ ಗಡಿ ಬೊಹೀಮಿಯನ್ ಅರಣ್ಯ ಮತ್ತು ಆಗ್ನೇಯದಿಂದ ವಾಯವ್ಯದತ್ತ ಹಬ್ಬಿ ಇಲರ್ ನದಿಯ ಕೊಳ್ಳದಲ್ಲಿ ಅಂತ್ಯಗೊಳ್ಳುವ ಬೊಹೀಮಿಯನ್ ಪರ್ವತ ಶ್ರೇಣಿಯಿಂದ ರಚಿತವಾಗಿದೆ. ರಾಖೆಲ್ ಮತ್ತು ಅರ್ಬರ್ ಇಲ್ಲಿನ ಅತಿ ಎತ್ತರದ ಶಿಖರಗಳು. ಬವೇರಿಯದ ವಾಯವ್ಯ ಪರ್ವತಗಡಿ ಮೇನ್ ನದಿಯ ಉತ್ತರಕ್ಕೆ ಕಾಡಿನಿಂದ ಕೂಡಿರುವ ಮರಳುಗಲ್ಲಿನ ಸ್ಟೈಗರ್‍ವಾಲ್ಟ್ ಶ್ರೇಣಿ ಹಾಗೂ ಪಶ್ಚಿಮದ ಗಡಿ ಸ್ವೇಬಿತನ್ ಶ್ರೇಣಿಗಳಿಂದ ಕೂಡಿದೆ. ಬವೇರಿಯನ್ ಆಲ್ಪ್ಸ್ ಕೆಲವು ಸರೋವರಗಳನ್ನೂಳಗೊಂಡ ಸುಂದರ ಪ್ರದೇಶ.

	ಬವೇರಿಯ ಮುಖ್ಯವಾಗಿ ಡ್ಯಾನ್ಯೂಬ್ ಮತ್ತು ಮೇನ್ ನದಿಗಳ ಬೋಗುಣಿ ಪ್ರದೇಶದಂತಿದೆ. ಈ ಎರಡು ನದಿಗಳನ್ನು ನೌಕಾಸಂಚಾರ ಸೌಲಭ್ಯಕ್ಕಾಗಿ ಲುಡ್‍ವಿಕ್ ಕಾಲುವೆಯಿಂದ ಸಂಪರ್ಕಿಸಿದೆ. ಡ್ಯಾನ್ಯೂಬ್ ನದಿ ಬವೇರಿಯದ ಬಹುಭಾಗಕ್ಕೆ ನೀರಾವರಿ ಸೌಲಭ್ಯಗಳನ್ನೊದಗಿಸುತ್ತದೆ. ಬವೇರಿಯದ ಮಧ್ಯ ಪಶ್ಚಿಮದಿಂದ ಪೂರ್ವಕ್ಕೆ ಹರಿದು ರಾಜ್ಯವನ್ನು ದಾಟುವ ಡ್ಯಾನ್ಯೂಬನ್ನು ದಕ್ಷಿಣದಿಂದ ನಾರಿಕ್, ಆಲ್ಟ್ಸ್‍ನಲ್ಲಿ ಹುಟ್ಟುವ ಇಲರ್, ಈಸಾರ್, ಲೆಖ್ ಮತ್ತು ಇನ್ ನದಿಗಳೂ ಉತ್ತರದಿಂದ ವಾರ್ನಿಟ್ಜ, ನಾಪ್ ಮತ್ತು ರೀಗೆನ್ ನದಿಗಳೂ ಕೂಡುತ್ತದೆ. ಅದು ರೈನ್ ನದಿಯನ್ನು ಸೇರುವೆಡೆಯಿಂದ ಬ್ಯಾಂಬರ್ಗ್‍ವರೆಗೂ ಸಂಚಾರಯೋಗ್ಯವಾಗಿದೆ.

	ಸಾಮಾನ್ಯವಾಗಿ ಮಧ್ಯ ಯೂರೊಪಿನ ಖಂಡಾಂತರ ವಾಯುಗುಣವಿರುವ ಬವೇರಿಯನ್ ಪ್ರಸ್ಥಭೂಮಿಯಲ್ಲಿ ಚಳಿ ಹೆಚ್ಚು. ಬೇಸಿಗೆ ತಂಪು, ರೈನ್ ಹಾಗೂ ನೆಕರ್, ಮೆನ್ ಮೋಸಲ್ ಕಣಿವೆಗಳಲ್ಲಿ ಉಷ್ಣತೆ ಹೆಚ್ಚು. ಬೇಸಗೆಯ ಸರಾಸರಿ ಉಷ್ಣತೆ 19º ಅ ಜನವರಿಯಲ್ಲಿ ºಅ ಗಿಂತ ಹೆಚ್ಚು. ಈ ಬಗೆಯ ಹವಾಗುಣ ದ್ರಾಕ್ಷಿಬೆಳೆಗೆ ಬಲು ಅನುಕೂಲಕರ.

	ಬವೇರಿಯದ ಬೇಸಾಯಯೋಗ್ಯ ಭೂಮಿಯಲ್ಲಿ ಅರ್ಧಕ್ಕಿಂತ ಹೆಚ್ಚುಭಾಗ ಬೇಸಾಯಕ್ಕೆ, ಅದರ ಕಾಲುಭಾಗ ತೋಟ ಮತ್ತು ಹುಲ್ಲುಮಾಳಗಳಿಗೆ ಮೀಸಲಾಗಿದೆ. ರೈ. ಓಟ್ಸ್, ಬೀಟ್, ಮತ್ತು ಆಲೂಗೆಡ್ಡೆ ಹಾಗೂ ತರಕಾರಿ ಬೆಳೆಸುತ್ತಾರೆ. ಹಣ್ಣುಗಳಲ್ಲಿ ದ್ರಾಕ್ಷಿ ಬೆಳೆ ಹೆಚ್ಚು ಪಶುಪಾಲನೆ ರೈತರ ಎರಡನೆ ಮುಖ್ಯ ಕಸಬು, ಆಲ್ಗಾನ್ ಜರ್ಮನಿಯ ಬೆಣ್ಣೆ ಮತ್ತು ಗಿಣ್ಣುಗಳ ಉತ್ಪಾದನಾಕೇಂದ್ರ. ಹಂದಿ ಮತ್ತು ಕೋಳಿ ಸಾಕಣೆಯುಂಟು. ಬವೇರಿಯದ ಅರಣ್ಯಗಳಲ್ಲಿ ಸ್ಪ್ರೂಸ್ ಮತ್ತು ಪೈನ್ ಮರಗಳು ಪ್ರಧಾನವಾಗಿವೆ. ಮಣ್ಣು ಫಲವತ್ತಾಗಿರದ ಕಡೆಗಳಲ್ಲಿ ಅರಣ್ಯಗಳನ್ನು ನಿರ್ಮಿಸುವುದಕ್ಕೆ ಪ್ರಯತ್ನ ನಡೆಯುತ್ತದೆ.

	ಬವೇರಿಯದ ಆರ್ಥಿಕೋನ್ನತಿಗೆ ಅದರ ಒಟ್ಟು ಉತ್ಪನ್ನದ ಅರ್ಧಕ್ಕೂ ಹೆಚ್ಚು ಕೈಗಾರಿಕೆ ಮತ್ತು ಹಸ್ತಕೌಶಲಗಳ ಉತ್ಪಾದನೆಗಳೂ ಉಳಿದದ್ದು ವ್ಯಾಪಾರ, ಸಾರಿಗೆ ಮತ್ತು ಸಾರ್ವಜನಿಕ ಸೇವೆಗಳೂ ಕೃಷಿ ಮತ್ತು ಆಸ್ತಿಗಳೂ ಕಾರಣವಾಗಿವೆ. ಎರಡನೆಯ ಮಹಾಯುದ್ಧದ ಅನಂತರ ಕೈಗಾರಿಕೆಗಳ ಅಭಿವೃದ್ಧಿಗಾಗಿ ಮಾಡಿದ ಪ್ರಯತ್ನಗಳಿಂದಾಗಿ ಬವೇರಿಯದಲ್ಲಿ ಜರ್ಮನಿಯ ಉಳಿದ ಭಾಗಗಳಿಗಿಂತ ಕೈಗಾರಿಕೆಗಳ ಬೆಳೆವಣಿಗೆ ಹೆಚ್ಚು ಪ್ರಮಾಣದಲ್ಲಾಯಿತು. ಮ್ಯೂನಿಕ್, ನ್ಯೂರೆಂಬರ್ಗ್, ಆಗ್ಸ್‍ಬರ್ಗ್‍ಗಳಲ್ಲಿ ಹಾಗೂ ಇತರ ನಗರಗಳಲ್ಲಿ ವಿವಿಧ ಕೈಗಾರಿಕೆಗಳಿದ್ದು ವಿದ್ಯುತ್ ಉಪಕರಣಗಳು ರಾಸಾಯನಿಕಗಳು, ಬಟ್ಟೆ ಆಹಾರ ಸಂಸ್ಕರಣೆ ಮುಂತಾದವು ಇವೆ. ಫ್ರಾಂಕೋನಿಯದಲ್ಲಿ ಬಟ್ಟೆ ಮತ್ತು ಕುಂಭಕಲೆಯ ಕೈಗಾರಿಕೆಗಳೂ ಉಂಟು, ಬವೇರಿಯದಲ್ಲಿ ಪ್ರವಾಸೋದ್ಯಮ ವಿಶೇಷ ಮಹತ್ತ್ವ ತಾಳಿರುವ ಉದ್ದಿಮೆ.

	ಬವೇರಿಯದಲ್ಲಿ ರೈಲು ಸಾರಿಗೆ ಪದ್ಧತಿ 19ನೆಯ ಶತಮಾನದ ಉತ್ತರಾರ್ಧದಲ್ಲಿ ವಿಶೇಷವಾಗಿ ಅಭಿವೃದ್ಧಿಗೊಂಡಿತು. ಅದು ಪ್ರಾರಂಭವಾದದ್ದು 1835ರಲ್ಲಿ. ಎಲ್ಲ ಮುಖ್ಯ ರೈಲುಮಾರ್ಗಗಳಲ್ಲಿ ವಿದ್ಯುತ್ ಇಲ್ಲವೇ ಡೀಸೆಲ್ ಎಂಜಿನ್ನುಗಳನ್ನು ಬಳಸಲಾಗುತ್ತಿದೆ. ಮ್ಯೂನಿಕ್‍ನಿಂದ ಫ್ರಾಂಕ್‍ಫರ್ಟ್, ಬರ್ಲಿನ್ ಮತ್ತು ಸಾಲ್ಜ್‍ಬರ್ಗ್‍ಗಳಿಗೆ ಹೆದ್ದಾರಿಗಳಿವೆ. ಬ್ಯಾರಿಬರ್ಗ್‍ದವರೆಗೆ ಮೇನ್ ನದಿಮೂಲಕ ಜಲಸಂಚಾರ ಉಂಟು. ಡ್ಯಾನ್ಯೂಬ್ ನದಿಯಲ್ಲಿ ಕೆಲ್ ಹೈಮ್ ವರೆಗೂ ಹಡಗುಗಳು ಹೋಗ ಬಲ್ಲವು. ಮ್ಯೂನಿಕ್ ಮತ್ತು ನ್ಯೂರೆಂಬರ್ಗ್‍ಗಳಲ್ಲಿ ವಿಮಾನ ನಿಲ್ದಾಣಗಳಿವೆ.

	ಬವೇರಿಯದ ರಾಜಧಾನಿ ಮ್ಯೂನಿಕ್, ವಿಸ್ತಿರ್ಣದಲ್ಲಿ ಇಡೀ ರಾಜ್ಯಕ್ಕೆ ದೊಡ್ಡದೂ ಹಾಗೇ ಜರ್ಮನಿಯಲ್ಲಿ ಮೂರನೆಯದೂ ಆಗಿರುವ ಮಹಾನಗರ. ಇದರ ಜನ ಸಂಖ್ಯೆ 1,314,865 (1976). ಕೈಗಾರಿಕೆ ಮತ್ತು ವ್ಯಾಪಾರಗಳ ಮುಖ್ಯ ಕೇಂದ್ರ. ವಿದ್ಯುತ್ ಉಪಕರಣಗಳು, ಸೂಕ್ಷ್ಮ ಯಂತ್ರೋಪಕರಣಗಳು, ವಿಮಾನ ಮತ್ತು ಇತರ ವಿವಿಧ ಆಧುನಿಕ ಯಂತ್ರಗಳು ಇಲ್ಲಿ ತಯಾರಾಗುತ್ತವೆ. ಬ್ಯಾಂಕ್ ವ್ಯವಹಾರ, ವಿಮೆ ಮತ್ತು ಭೋಜನಕಲೆಗಳಿಗೆ (ಪಾಕಶಾಸ್ತ್ರಕ್ಕೆ) ಪ್ರಸಿದ್ಧಿ. ಜರ್ಮನಿಯ ಅತಿ ದೊಡ್ಡ ವಿಶ್ವವಿದ್ಯಾಲಯ ಅನೇಕ ಉತ್ತಮ ವಸ್ತುಸಂಗ್ರಹಾಲಯ ಮತ್ತು ಚಿತ್ರಶಾಲೆಗಳನ್ನು ಹೊಂದಿರುವ ಮ್ಯೂನಿಕ್ ಕಲಾಕೇಂದ್ರವೂ ಆಗಿದೆ. 1972ರಲ್ಲಿ ಒಲಿಂಪಿಕ್ ಸ್ಪರ್ಧೆಗಳು ಅಲ್ಲಿ ನಡೆದವು. ನ್ಯೂರೆಂಬರ್ಗ್ ಈ ರಾಜ್ಯದ ಎರಡನೆಯ ದೊಡ್ಡನಗರ, ಆಗ್ಸ್‍ಬರ್ಗ್ ರೀಗೆನ್ಸ್‍ಬರ್ಗ್ ಮತ್ತು ವಟ್ರ್ಸ್‍ಬರ್ಗ್ ಇವಲ್ಲದೆ ಇನ್ನೂ ಕೆಲವು ದೊಡ್ಡ ನಗರಗಳು ಇವೆ. ಬವೇರಿಯಕ್ಕೆ ತನ್ನದೇ ಆದ ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳ ಸಮೃದ್ಧ ಪರಂಪರೆಯಿದೆ. ಮ್ಯೂನಿಕ್‍ನಲ್ಲಿರುವ ಮೂರು ರಾಜ್ಯ ನಾಟಕ ಗೃಹಗಳೂ ಸೇರಿದಂತೆ ಎಲ್ಲ ದೊಡ್ಡಶಹರಗಳಲ್ಲೂ ನಾಟಕ ಗೃಹಗಳಿವೆ. ಮ್ಯೂಮಿಕ್‍ನಲ್ಲಿರುವ ಬವೇರಿಯನ್ ರಾಜ್ಯ ಗ್ರಂಥಾಲಯ ಹೆಸರಾದದ್ದು. ರೇಡಿಯೊ ಮತ್ತು ಟೆಲಿವಿಷನ್ ಕಾರ್ಯ ಕ್ರಮಗಳನ್ನು ಬಿತ್ತರಿಸುವ ಬವೇರಿತನ್ ರೇಡಿಯೊ ವ್ಯವಸ್ಥೆಯ ಮುಖ್ಯ ಕಾರ್ಯಾಲಯ ಮ್ಯೂನಿಕನಲ್ಲಿದೆ.

	ಬವೇರಿಯ 1946ರ ಸಂವಿಧಾನದನ್ವಯ ಪಶ್ಚಿಮ ಜರ್ಮನಿಯ ಚೌಕಟ್ಟಿನೊಳಗೆ ಸಂಸದೀಯ ಪ್ರಜಾಪ್ರಭುತ್ವ ಪಡೆದಿರುವ ಒಂದು ಸ್ವತಂತ್ರ ರಾಜ್ಯ. ಕೆಳಮನೆ ಲ್ಯಾಂಡ್‍ಟ್ಯಾಗಿಗೆ ಪ್ರತಿನಿಧಿಗಳನ್ನು ನಾಲ್ಕು ವರ್ಷಗಳಿಗೊಮ್ಮೆ ನೇರಮತ ದಾನದ ಮೂಲಕ ಆರಿಸಲಾಗುತ್ತದೆ. ಕೆಳಮನೆ ಒಬ್ಬ ಮಂತ್ರಿ ಅಧ್ಯಕ್ಷನನ್ನು ಆರಿಸಿ ಮಂತ್ರಿ ಮಂಡಲವನ್ನು ರಚಿಸುತ್ತದೆ. ಸೆನೆಟ್, ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಇನ್ನೊಂದು ಸಭೆ ಇರುತ್ತದೆ ಬವೇರಿಯವನ್ನು ಏಳು ಆಡಳಿತಾತ್ಮಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ನಗರಗಳಲ್ಲಿ ಸ್ವತಂತ್ರ ಸಭೆಗಳಿವೆ. ಶಾಲಾ, ಕಾಲೇಜುಗಳು, ನ್ಯಾಯಾಲಯಗಳು ಮತ್ತು ಇತರ ಸಾರ್ವಜನಿಕ ರಕ್ಷಣಾ ನಿಯಮಗಳೆಲ್ಲವೂ ಪೂರ್ಣವಾಗಿ ಸಂಯುಕ್ತ ಗಣರಾಜ್ಯದೊಂದಿಗೆ ಸಂಯೋಜಿತವಾಗಿವೆ.

	ಈಗ ಬವೇರಿಯ ಎಂದು ಕರೆಯಲಾಗುತ್ತಿರುವ ಪ್ರದೇಶದಲ್ಲಿ ಹಿಂದೆ ಕೆಲ್ಪಿಕ್ ಜನವಾಸಿಸುತ್ತಿದ್ದರು. ಕ್ರಿ. ಪೂ 15ರ ಸುಮಾರಿಗೆ ರೋಮನ್ನರು ಆಗ್ಸ್‍ಬರ್ಗ್ ಪಾಸೊ ಮತ್ತು ರೀಗನ್ಸ್‍ಬರ್ಗ್ ಸೇರಿದಂತೆ ಅನೇಕ ಕಡೆಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. 5ನೆಯ ಶತಮಾನದಲ್ಲಿ ಒಡ್ವಾಸರನ ಪಡೆಗಳು ಈ ಪ್ರದೇಶವನ್ನು ಕೊಳ್ಳೆಹೊಡೆದು ಹೆಚ್ಚು ಕಡಿಮೆ ನಿರ್ಜನ ಪ್ರದೇಶವಾಗಿ ಮಾಡಿದುವು. ಮುಂದೆ ಬವೇರಿಯನ್ನರಿಂದ ಹೆಸರನ್ನು ಪಡೆದ ಜಮ್ರ್ಯಾನಿಕ್ ಜನ ಡ್ಯಾನ್ಯೂಬ್ ಕಣಿವೆಯಿಂದ ಬಂದು ಇಲ್ಲಿ ವಾಸಿಸತೊಡಗಿದರು. ಅವರನ್ನು ಗೆದ್ದ ಫ್ರ್ಯಾಂಕರಿಗೆ ಈ ಪ್ರದೇಶ ಸೇರಿತು. 10ನೆಯ ಶತಮಾನದ ಪ್ರಾರಂಭದಲ್ಲಿ ಡ್ಯೂಕನ ಆಧಿಪತ್ಯ ಪುನಃ ಸ್ಥಾಪಿತವಾಗಿ ಆ ಶತಮಾನ ಮಧ್ಯದ ಸುಮಾರಿಗೆ ಡ್ಯೂಕ್ ಮೊದಲನೆಯ ಹೆನ್ರಿಯ ಕಾಲದಲ್ಲಿ ಬವೇರಿಯ ಬಹಳಷ್ಟು ವಿಸ್ತೀರ್ಣಗೊಂಡಿತು. ಅದರ ಮೇರೆಗಳು ಏಡ್ರಿಯಾಟಿಕ್ ಸಮುದ್ರದಿಂದ ಮ್ಲೇನಿನ ಹಾಗೂ ಲೀತಾದಿಂದ ಲತ್‍ನ ವರೆಗೆ ಹಬ್ಬಿದುವು. 11ನೆಯ ಶತಮಾನದ ಅಂತ್ಯದಲ್ಲಿ ಬವೇರಿಯ ವೆಲ್ಟ್ ಕುಟುಂಬಕ್ಕೆ ಸೇರಿತು. ಬವೇರಿಯ ಮತ್ತು ಸ್ಯಾಕ್ಸ್‍ನಿಗಳೆರಡರ ಸ್ವಾಮ್ಯವನ್ನು ಪಡೆದಿದ್ದ ಮೊದಲನೆಯ ವೆಲ್ಪನ ಮೊಮ್ಮಗನಿಂದ ಬವೇರಿಯ ಬೇರೆಯಾಗಿ ರೋಮನ್ ಸಾಮ್ರಾಟ ಮನೆತನಕ್ಕೆ ಹಿಂತಿರುಗಿತು. ಬವೇರಿಯದ ಡ್ಯೂಕರಲ್ಲೆ ಒಬ್ಬನಾದ ನಾಲ್ಕನೆಯ ಲೂಯಿಸ್ ಪವಿತ್ರ ರೋಮನ್ ಸಾಮ್ರಾಜ್ಯದ ಸಮ್ರಾಟನಾಗಿದ್ದ (1314-47) 1504 ರಲ್ಲಿ ಆಲ್ಬರ್ಟ್ ದಿ ವೈಸ್‍ನ ಕೆಳಗೆ ಡಚಿಯು ಒಂದಾಯಿತು. ಅವನ ಮರಣಾನಂತರ ಅವನ ಮಕ್ಕಳಾದ ನಾಲ್ಕನೆಯ ವಿಲಿಯಮ್ ಮತ್ತು ಲೂಯಿಸರ ನಡುವೆ ಬವೇರಿಯವನ್ನು ಭಾಗಶಃ ವಿಭಜನೆ ಮಾಡಲಾಯಿತು. 1545ರಲ್ಲಿ ಲೂಯಿಸ್ ಸತ್ತ. ಅನಂತರ ನಾಲ್ಕನೆಯ ವಿಲಿಯಮ್ಮನ ಕೆಳಗೆ ಬವೇರಿಯ ಒಂದಾಯಿತು. 1ನೆಯ ಮಾಕ್ಸಿಮಿಲಿಯನ್ನನ ಕಾಲದಲ್ಲಿ ಬವೇರಿಯದ ಪ್ರಾಬಲ್ಯ ಹೆಚ್ಚಿತು. ಅವನು ಆಂತರಿಕ ಸುಧಾರಣೆಗಳನ್ನು ಮಾಡಿದ್ದಲ್ಲದೆ ಮೂವತ್ತು ವರ್ಷಗಳ ಯುದ್ಧದಲ್ಲಿ (1618-48) ಸಕ್ರಿಯ ಭಾಗವಹಿಸಿ ತನ್ನ ಕೌಂಟಿಗೆ ಮೇಲಿನ ಪಲ್ಯಾಟ್‍ನೇಟನ್ನು ಸೇರಿಸಿದ. 1777 ರಲ್ಲಿ ವಿಟ್ಟೆಲ್ಸ್‍ಬ್ಯಾಕ್ ಮನೆತನ ಕೊನೆಗೊಂಡು ಆಧಿಮ್ತಯ ಪಾಲ್ಯಾಟನ್ ಚುನಾಯತ ಚೌಲ್ರ್ಸ್ ತಿಯೋಡೋರನಿಗೆ ಸೇರಿತು ಮತ್ತು ಜ್ಯೂಲಿಕ್ ಮತ್ತು ಬರ್ಗ್‍ಗಳ ಡಚಿಗಳು ಬವೇರಿಯಕ್ಕೆ ಜೋಡಿ ಸಲ್ಫಟ್ಟುವೂ. ಇದು ಮುಂದೆ ಬವೇರಿಯದ ಉತ್ತರಾಧಿಕಾರದ ನಾಂದಿಯಾಯಿತು. 1805ರಲ್ಲಿ ಆಸ್ಟ್ರಿಯದ ವಿರುದ್ಧ ಯುದ್ಧದಲ್ಲಿ ಫ್ರಾನಗಸಿನೊಂದಿಗೆ ಹೋರಾಡಿ ಬವೇರಿಯ ಕೆಲ ಪ್ರದೇಶವನ್ನು ಪಡೆಯಿತು. 1813ರ ತನಕ ಬವೇರಿಯ ನೆಪೋಲಿಯನ್ನನೊಂದಿಗೆ ಸಖ್ಯದಿಂದಿತ್ತು. ಅದು ಒಂದು ರಾಜ್ಯವಾಗಿ 1ನೆಯ ಮ್ಯಾಕ್ಸಿಮಿಲಿಯನ್ ರಾಜನೆಂದು ನೆಪೋಲಿಯನ್ನನಿಂದ ಮನ್ಯತೆ ಪಡೆದ. 1813ರಲ್ಲಿ ಮಿತ್ರ ರಾಷ್ಟ್ರಗಳು ನೆಪೋಲಿಯನ್ನನು ಹಿಂದೆ ಬವೇರಿಯಕ್ಕೆ ನೀಡಿದ ಅನುಕೂಲ, ಸೌಲಭ್ಯಗಳನ್ನು ಮಾನ್ಯ ಮಾಡಿದುವು. 1818ರಲ್ಲಿ ಸಂಧಾನಾತ್ಮಕ ರಾಜಪ್ರಭುತ್ವ ಅಸ್ತಿತ್ವದಲ್ಲಿ ಬಂತು. ಅನೇಕ ರಾಜಕೀಯ ಮತ್ತು ಧಾರ್ಮಿಕ ಸುಧಾರಣೆಗಳನ್ನು ಕೈಕೊಂಡ 1ನೆಯ ಮಾಕ್ಸಿಮಿಲಿಯನ್ ಪ್ರಜೆಗಳ ಪ್ರೀತಿಗೆ ಪಾತ್ರನಾದ. ಅವನ ಅನಂತರ 1825ರಲ್ಲಿ ಪಟ್ಟಕ್ಕೆ ಬಂದ-1ನೆಯ ಲುಡ್‍ವಿಕ್ ಮ್ಯೂನಿಕ್ಕನ್ನು ಸಂಸ್ಕ್ತತಿ ಮತ್ತು ಕಲೆಗಳ ಕೇಂದ್ರವಾಗಿ ಮಾಡಿದ. 1870ರಲ್ಲಿ ಬವೇರಿಯ ಏಕೀಕೃತ ಜರ್ಮನ್ ಸಾಮ್ರಾಜ್ಯದ ಒಂದು ಭಾಗವಾಯಿತು. ಏಕೀಕರಣದ ಅನಂತರ ಸಾಮ್ರಾಜ್ಯದ ಪ್ರಧಾನ ರಾಜ್ಯಗಳಾದ ಬವೇರಿಯ ಪ್ರಷ್ಯಗಳ ನಡುವೆ ಈಷ್ರ್ಯೆಯಿತ್ತಾದರೂ ಬವೇರಿಯಕ್ಕೆ ಸಾಮ್ರಾಜ್ಯದಲ್ಲಿ ಕೆಲವು ವಿಶೇಷ ಸೌಲತ್ತುಗಳನ್ನು ನೀಡಲಾಗಿತ್ತು. ಅದು ತನ್ನದೇ ಆದ ಅಂಚೆಪದ್ಧತಿ, ರೈಲು ಮಾರ್ಗ, ರಾಯಭಾರ ಸೇವೆ ಮತ್ತು. (ಶಾಂತತೆಯ ಕಾಲದಲ್ಲಿ) ಸೈನ್ಯವನ್ನು ಹೊಂದಿತ್ತು. 1912ರ ತನಕ ರಾಜಪ್ರತಿನಿಧಿಯಾಗಿ ಆಳಿದ ಲಿಯೋಪೋಲ್ಡ್‍ನ ಕಾಲದಲ್ಲಿ ಬವೇರಿಯಾ ಅಭಿವೃದ್ಧಿಗೊಂಡಿತು. ಅವನ ಅನಂತರ ರಾಜಪ್ರತಿನಿಧಿತ್ವವನ್ನು ವಹಿಸಿಕೊಂಡ ಅವನ ಮಗ 3ನೆಯ ಲುಡ್‍ವಿಗ್‍ನೆಂದು 5.11.1913ರಂದು ಪಟ್ಟವನ್ನೇರಿದ. 1ನೆಯ ಮಹಾಯುದ್ಧದಲ್ಲಿ ಜರ್ಮನಿಗೆ ಸೋಲಾದ ಅನಂತರ 1918ರಲ್ಲಿ ಬವೇರಿಯದಲ್ಲಿ ಕ್ರಾಂತಿಯುಂಟಾಗಿ ಬವೇರಿಯವನ್ನು ಪ್ರಜಾಪ್ರಭುತ್ವವೆಂದು ಸಾರಲಾಯಿತು. ಅದೇ ವರ್ಷ ವೈಮಾರ್ ಸಂವಿಧಾನದ ಕೆಳಗೆ ಬವೇರಿಯ ಪ್ರಜಾಪ್ರಭುತ್ವ ಗಣರಾಜ್ಯವಾಯಿತು. ವೈಮಾರ್ ಗಣರಾಜ್ಯದ ಕೆಳಗೆ ಬವೇರಿಯ ಅನೇಕ ಪ್ರಗತಿ ವಿರೋಧಿ ಹಾಗೂ ನ್ಯಾಷನಲಿಸ್ಟ್ (ನಾಟ್ಸಿ) ಚಳವಳಿಗಳ ಕೇಂದ್ರವಾಯಿತು. ಅವುಗಳಲ್ಲಿ ಅಡಾಲ್ಫ್ ಹಿಟ್ಲರ್ ಮುಂದಾಳುತನದ ನ್ಯಾಷನಲಿಸ್ಟ್ ಸಮಾಜವಾದದ ಚಳವಳಿ ಮುಖ್ಯವಾದದ್ದು. ಮ್ಯೂನಿಕ್ ನಾಟ್ಸಿ ಚಳವಳಿಯ ಕೇಂದ್ರವಾಯಿತು. ನಟ್ಸಿಗಳ ಆಳ್ವಿಕೆಯಲ್ಲಿ ಬವೇರಿಯ ರಾಜ್ಯತ್ವವನ್ನು ಕಳೆದುಕೊಂಡು ಕೇವಲ ಒಂದು ಆಡಳಿತ ಘಟಕವಾಯಿತು. 2ನೆಯ ಮಹಾಯುದ್ಧದ ಅನಂತರ ಬವೇರಿಯದ ಬಹುಭಾಗ ಅಮೆರಿಕೆಯ ಆಕ್ರಮಣ ಸೇನೆಯ ಅಧಿಕಾರಕ್ಕೆ ಒಳಗಾಗಿತ್ತು. 1946ರಲ್ಲಿ ಬವೇರಿಯಾದ ಸರ್ಕಾರ ಅಧಿಕಾರ ವಹಿಸಿಕೊಂಡಿತು.		
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ